Published on 06 June 2026
ತಂಬಾಕು ಚಟವು , ಚಟ್ಟ ಸೇರುವ ತನಕ ನಮ್ಮ ಬೆನ್ನಿಗೆ ಅ೦ಟಿದ ಭೂತ. ಸಿಗರೇಟ್, ಬೀಡಿ, ಗುಟ್ಕಾ, ಪಾನ್ ಮಸಾಲಾ, ಹುಕ್ಕಾ ಹೀಗೆ ಯಾವುದೇ ರೂಪದಲ್ಲಿದ್ದರೂ ತಂಬಾಕು ದೇಹದ ಪ್ರತಿಯೊಂದು ಅಂಗದ ಮೇಲೂ ಮಾರಕ ಪರಿಣಾಮ ಬೀರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಪ್ರತಿವರ್ಷ ಲಕ್ಷಾಂತರ ಜನರು ತಂಬಾಕು ಸಂಬಂಧಿತ ಕಾಯಿಲೆಗಳಿಂದ ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ.ಕರ್ನಾಟಕದಲ್ಲಿ ಪ್ರತಿ ವರ್ಷ ಸುಮಾರು ೮೭,೦೦೦ ದಿಂದ ೯೪,೦೦೦ ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದು , ಸಾಕಷ್ಟು ಸಾವು ನೋವುಗಳು ಸಂಭವಿಸಿದೆ. ಶ್ವಾಸಕೋಶ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಹೃದಯ ರೋಗ, ಪಾರ್ಶ್ವವಾಯು ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳಿಗೆ ತಂಬಾಕು ಪ್ರಮುಖ ಕಾರಣವಾಗಿದೆ.
ವಿಶ್ವ ತಂಬಾಕು ವಿರೋಧಿ ದಿನದ 2026ರ ಘೋಷವಾಕ್ಯ “Unmasking the Appeal – Countering Nicotine and Tobacco Addiction” ಆಗಿದ್ದು, ಯುವಜನರನ್ನು ಸೆಳೆಯಲು ತಂಬಾಕು ಮತ್ತು ನಿಕೋಟಿನ್ ಉತ್ಪನ್ನಗಳ ಹಿಂದೆ ಅಡಗಿರುವ ಮೋಸಮಯ ತಂತ್ರಗಳನ್ನು ಬಯಲಿಗೆಳೆಯುವ ಉದ್ದೇಶ ವನ್ನು ಈ ದಿನಾಚರಣೆ ಹೊಂದಿದೆ.ಇಂದು ತಂಬಾಕು ಉದ್ಯಮವು ಬಣ್ಣಬಣ್ಣದ ಪ್ಯಾಕೆಟ್‌ಗಳು, ವಿವಿಧ ಸುವಾಸನೆಗಳು ಹಾಗೂ ಆಕರ್ಷಕ ಜಾಹೀರಾತುಗಳ ಮೂಲಕ ಯುವ ಪೀಳಿಗೆಯನ್ನು ವ್ಯಸನದ ಬಲೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಆದರೆ ಆ ಆಕರ್ಷಣೆಯ ಹಿಂದೆ ಅಡಗಿರುವುದು ರೋಗ, ನೋವು, ಕಣ್ಣೀರು ಮತ್ತು ಅಕಾಲಿಕ ಮರಣವಷ್ಟೇ . ಒಂದು ಕುಟುಂಬದ ನಗುವನ್ನು ಕಸಿದುಕೊಳ್ಳಲು ತಂಬಾಕಿಗೆ ಕೆಲವೇ ವರ್ಷಗಳು ಸಾಕು. ಕ್ಯಾನ್ಸರ್ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅನೇಕ ರೋಗಿಗಳ ಕಥೆಗಳು ಒಂದೇ ಸಂದೇಶವನ್ನು ನೀಡುತ್ತದೆ “ಆ ದಿನ ತಂಬಾಕಿಗೆ ಇಲ್ಲ ಎಂದು ಹೇಳಿದ್ದರೆ, ಇಂದು ಈ ನೋವು ಎದುರಾಗುತ್ತಿರಲಿಲ್ಲ" ಎಂದು.
ನಮ್ಮ ದಾವಣಗೆರೆಯ ಹೆಮ್ಮೆಯ ಆರೋಗ್ಯ ಸಂಸ್ಥೆಯಾದ ಬಾಪೂಜಿ ವಿದ್ಯಾ ಸಂಸ್ಥೆ , ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಯು ಕ್ಯಾನ್ಸರ್ ತಡೆಗಟ್ಟುವಿಕೆ, ತಂಬಾಕು ವಿರೋಧಿ ಜಾಗೃತಿ ಹಾಗೂ ಅತ್ಯಾಧುನಿಕ ಕ್ಯಾನ್ಸರ್ ಚಿಕಿತ್ಸೆಗಳ ಮೂಲಕ ಸಾವಿರಾರು ರೋಗಿಗಳಿಗೆ ಹೊಸ ಬದುಕಿನ ಆಶಾಕಿರಣವಾಗುತ್ತಿದೆ. ವಿಶ್ವಮಟ್ಟದ ತಂತ್ರಜ್ಞಾನ, ಅನುಭವಿ ವೈದ್ಯರ ತಂಡ ಹಾಗೂ ಮಾನವೀಯ ಸೇವೆಯೊಂದಿಗೆ ಈ ಸಂಸ್ಥೆ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದೆ.
ತಂಬಾಕು ಸೇವನೆಯಿಂದ ಉಂಟಾಗುವ ಬಾಯಿ, ಗಂಟಲು, ಶ್ವಾಸಕೋಶ ಮತ್ತು ಇತರ ಕ್ಯಾನ್ಸರ್‌ಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಮುಂಚಿತ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆಯನ್ನು ಒದಗಿಸುವುದು ಸಂಸ್ಥೆಯ ಪ್ರಮುಖ ಧ್ಯೇಯವಾಗಿದ್ದು , ಕ್ಯಾನ್ಸರ್ ಅನ್ನು ಬೇಗ ಪತ್ತೆ ಹಚ್ಚಿದರೆ ಬದುಕಿನ ಸಾಧ್ಯತೆ ಹೆಚ್ಚುತ್ತದೆ ಎಂಬ ಸಂದೇಶವನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಆಸ್ಪತ್ರೆಯು ನಿರಂತರವಾಗಿ ಮಾಡುತ್ತಿದೆ.
ಈ ವಿಶ್ವ ತಂಬಾಕು ವಿರೋಧಿ ದಿನದಂದು ನಾವು ಒಂದು ಪ್ರತಿಜ್ಞೆಯನ್ನು ಮಾಡೋಣ: “ತಂಬಾಕಿಗೆ ಇಲ್ಲ ಹೇಳೋಣ, ಆರೋಗ್ಯಕರ ಬದುಕಿಗೆ ಹೌದು ಹೇಳೋಣ” ನಮ್ಮ ಒಂದು ನಿರ್ಧಾರ ನಮ್ಮ ಬದುಕನ್ನು ಮಾತ್ರವಲ್ಲ, ನಮ್ಮ ಕುಟುಂಬದ ಭವಿಷ್ಯವನ್ನೂ ಉಳಿಸಬಲ್ಲದು. ಬನ್ನಿ, ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ. ಆರೋಗ್ಯವೇ ನಿಜವಾದ ಸಂಪತ್ತು ಎಂಬುದನ್ನು ಅರಿತು, ವ್ಯಸನದ ಕತ್ತಲೆಯಿಂದ ಆರೋಗ್ಯದ ಬೆಳಕಿನತ್ತ ಹೆಜ್ಜೆ ಹಾಕೋಣ, ನಾವು , ನಮ್ಮವರನ್ನು ಕೆಟ್ಟ ಚಟಗಳಿಂದ ದೂರಮಾಡೋಣ , ದೂರವಿರೋಣ.
“ತಂಬಾಕಿನ ಹೊಗೆಯಲ್ಲಿ ಕನಸುಗಳನ್ನು ಸುಡಬೇಡಿ , ಜೀವನವನ್ನು ಪ್ರೀತಿಸಿ, ಆರೋಗ್ಯವನ್ನು ಉಳಿಸಿ.”
ತಲೆ ಮತ್ತು ಕುತ್ತಿಗೆ ಶಸ್ತ್ರಜ್ನರು
ವಿಶ್ವರಾಧ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ , ದಾವಣಗೆರೆ.