Let's be Together

Extra info thumb
  • 9844458881
  • vishwaradhyacancerhospital2019@gmail.com

ಕ್ಯಾನ್ಸರ್ ದೈಹಿಕ ರೋಗವಷ್ಟೇ : ಮಾನಸಿಕ ರೋಗವಾಗಲೂ ಬಿಡದಿರಿ

Published on 29 May 2026

Blog Image

ಕ್ಯಾನ್ಸರ್ ಎಂಬ ಪದ ಕೇಳಿದ ಕ್ಷಣವೇ ರೋಗಿ ಮಾತ್ರವಲ್ಲ, ಅವರ ಕುಟುಂಬದವರು ಮತ್ತು ಸುತ್ತಲಿನವರಿಗೆ ಮನದಲ್ಲಿ ಆತಂಕ ಮನೆ ಮಾಡುವುದು ಸಹಜವಾಗಿದೆ.ಈ ಕಾಯಿಲೆ ಕೇವಲ ದೈಹಿಕ ರೋಗವಾಗಿ ಉಳಿಯದೇ ಮಾನಸಿಕ ಮತ್ತು ಸಾಮಾಜಿಕ , ಆರ್ಥಿಕ ಸವಾಲುಗಳನ್ನೂ ತಂದೊಡ್ಡುವ ಒಂದು ಹೋರಾಟವಾಗಿ ಪರಿಣಮಿಸಿದೆ. ಈ ಹೋರಾಟದಲ್ಲಿ ಔಷಧೋಪಚಾರದ ಜೊತೆಗೆ ಮಾನಸಿಕ ಧೈರ್ಯವೇ ಅತ್ಯಂತ ಮುಖ್ಯವಾಗಿದೆ.

ಕ್ಯಾನ್ಸರ್ ರೋಗನಿರ್ಣಯವಾದಾಗ , ರೋಗಿಗಳಿಗೆ ತಮ್ಮ ಜೀವನ ಮುಗಿದಂತಿದೆ ಎಂಬ ಭಾವನೆ ಬರುತ್ತದೆ.ಈ ಸಮಯದಲ್ಲಿ ಇಂದಿನ ಆಧುನಿಕ ವೈದ್ಯಕೀಯ ವ್ಯವಸ್ಥೆಯಲ್ಲಿ ಕ್ಯಾನ್ಸರ್ ಅನ್ನು ನಿಯಂತ್ರಿಸುವುದು, ಗುಣಪಡಿಸುವುದು ಸಾಧ್ಯವಾಗುತ್ತದೆ ಎನ್ನುವ ಮಾಹಿತಿಯನ್ನು ರೋಗಿಯ ಮನಸ್ಸಿನಲ್ಲಿ ಬಿತ್ತುವುದು ಬಹಳ ಮುಖ್ಯ.ಕುಟುಂಬದ ಪ್ರೀತಿ, ಸ್ನೇಹಿತರ ಬೆಂಬಲ, ವೈದ್ಯರ ಆತ್ಮೀಯ ಸಲಹೆ ,ಇವೆಲ್ಲವೂ ರೋಗಿಗಳಿಗೆ ಹೊಸ ಶಕ್ತಿ ತುಂಬುತ್ತದೆ.

ರೋಗದ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳುವುದು,ಮಾನಸಿಕ ಧೈರ್ಯ ಹೆಚ್ಚಿಸಲು ಧನಾತ್ಮಕ ಚಿಂತನೆ ,ತಮ್ಮ ಭಾವನೆಗಳನ್ನು ಮುಚ್ಚಿಡದೆ ಪ್ರೀತಿಪಾತ್ರರೊಂದಿಗೆ ಹೇಳಿಕೊಳ್ಳುವುದು. ಧ್ಯಾನ, ಪ್ರಾರ್ಥನೆ, ಸಂಗೀತ, ಓದು ಇನ್ನೀತರ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು.ಅಲ್ಲದೇ ಸಾಮಾಜಿಕ ಬೆಂಬಲವೂ ಅಷ್ಟೇ ಮುಖ್ಯ. ರೋಗಿಯನ್ನು ಬೇರ್ಪಡಿಸದೇ, ಸಹಜವಾಗಿ ನೋಡಿಕೊಳ್ಳುವುದು, ಗೌರವದಿಂದ ವರ್ತಿಸುವುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸಮಾಜದ ಒಗ್ಗಟ್ಟೇ ರೋಗಿಗೆ ದೊಡ್ಡ ಔಷಧಿಯಂತೆ ಕೆಲಸ ಮಾಡುತ್ತದೆ.

ಅಲ್ಲದೇ ಆಹಾರ ಪದ್ಧತಿ ಕ್ಯಾನ್ಸರ್ ತಡೆಗಟ್ಟುವಲ್ಲಿ ಮತ್ತು ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಪೌಷ್ಟಿಕ ಆಹಾರ, ಹಸಿರು ತರಕಾರಿಗಳು, ಹಣ್ಣುಗಳು, ಧಾನ್ಯಗಳು ಮತ್ತು ಸಾಕಷ್ಟು ನೀರು ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಅದೇ ವೇಳೆ ಅತಿಯಾದ ಜಂಕ್ ಫುಡ್, ಪ್ಯಾಕೆಟ್ ಆಹಾರ,ಸಿಹಿ ಪದಾರ್ಥಗಳು ಮತ್ತು ಅತಿಯಾದ ಎಣ್ಣೆ ಬಳಕೆಯನ್ನು ಕಡಿತಗೊಳಿಸಬೇಕು.

ಧೂಮಪಾನ, ತಂಬಾಕು ಸೇವನೆ, ಮದ್ಯಪಾನ, ನಿದ್ರೆ ಕೊರತೆ ಹಾಗೂ ದೈಹಿಕ ಚಟುವಟಿಕೆಯ ಕೊರತೆ ಮುಂತಾದ ಕೆಟ್ಟ ಅಭ್ಯಾಸಗಳು ಬಾಯಿ, ಗಂಟಲು, ಶ್ವಾಸಕೋಶ ಮತ್ತು ಅನ್ನನಾಳ ಕ್ಯಾನ್ಸರ್‌ ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಧೂಮಪಾನವನ್ನು ತ್ಯಜಿಸುವುದರಿಂದ ಕೇವಲ ಕ್ಯಾನ್ಸರ್ ಅಪಾಯವಷ್ಟೇ ಅಲ್ಲ, ಹೃದಯ ಮತ್ತು ಶ್ವಾಸಕೋಶ ಸಂಬಂಧಿತ ರೋಗಗಳೂ ಕಡಿಮೆಯಾಗುತ್ತದೆ.ಇಂಥ ಕೆಟ್ಟ ಅಭ್ಯಾಸಗಳನ್ನು ಸಮಯಕ್ಕೆ ಸರಿಯಾಗಿ ಬಿಟ್ಟುಬಿಡುವುದು ಮತ್ತು ತಡೆಯುವುದರಿಂದ ಕ್ಯಾನ್ಸರ್ ನಿಂದ ದೂರ ಉಳಿಯಬಹುದಾಗಿದೆ.ನಾವು ತಿನ್ನುವ ಪೌಷ್ಟಿಕ ಆಹಾರ ಮತ್ತು ಆರೋಗ್ಯಕರ ಜೀವನ ಶೈಲಿಯಿಂದ ಈ ಕ್ಯಾನ್ಸರ್ ಅಪಾಯವನ್ನು ದೂರ ಮಾಡಮಾಡಬಹುದು.

ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಯಾರೂ ಒಂಟಿಯಲ್ಲ. ಸಾಮಾಜಿಕ ಜಾಗೃತಿ, ಮಾನಸಿಕ ಧೈರ್ಯ, ಉತ್ತಮ ಆಹಾರ ಪದ್ಧತಿ ಮತ್ತು ಕೆಟ್ಟ ಅಭ್ಯಾಸಗಳಿಂದ ದೂರವಿರುವುದರ ಮೂಲಕ ನಾವು ಕ್ಯಾನ್ಸರ್ ವಿರುದ್ಧ ಒಟ್ಟಾಗಿ ಬಲಿಷ್ಠ ಸಮಾಜವನ್ನು ನಿರ್ಮಿಸಬಹುದು.

“ಇಂದಿನ ಜಾಗೃತಿಯೇ, ನಾಳೆಯ ಆರೋಗ್ಯಕರ ಬದುಕಾಗಲಿ.”

Author

Archana. Ramakrishna

Counselor | Editorial Department

Vishwaradhya Cancer Hospital & Research Institute


We need your feedback because it values us lot and helps us to improve and impact better and more, thank you for taking the time to provide your feedback.